ಪ್ರದ್ಯುಮ್ನ
ಶ್ರೀಕೃಷ್ಣ ಮತ್ತು ರುಕ್ಮಿಣಿಯರಿಗೆ ಹುಟ್ಟಿದ ಹತ್ತುಮಂದಿ ಗಂಡುಮಕ್ಕಳಲ್ಲಿ ಒಬ್ಬ. ಇವನಿಗೆ ಚಾರುಮತಿ ಎಂಬ ಒಬ್ಬ ಸಹೋದರಿಯೂ ಇದ್ದಳು. ಪ್ರದ್ಯುಮ್ನನಿಂದ ತನ್ನ ಮರಣವೆಂದು ತಿಳಿದಿದ್ದ ಶಂಬರಾಸುರನೆಂಬ ರಾಕ್ಷಸ ಮಾಯಾವೇಷದಲ್ಲಿ ಬಂದು ಮಗುವನ್ನು ಆಕಾಶಗಾಮಿಯಾಗಿ ಕದ್ದೊಯ್ಯುತ್ತಿರುವಾಗ, ಕೈತಪ್ಪಿ ಸಮುದ್ರಕ್ಕೆ ಬಿದ್ದ ಮಗುವನ್ನು ಒಂದು ಹೆಣ್ಣು ಮೀನು ನುಂಗಿತು. ತುಂಬುಕಳೆಯಿಂದ ತೇಜಸ್ವಿಯಾದ ಆ ಮೀನನ್ನು ಬೆಸ್ತರು ರಾಜ ಶಂಬರಾಸುರನಿಗೆ ಅರ್ಪಿಸಿದರು. ಅಡುಗೆಗೆಂದು ಮೀನನ್ನು ರಾಣೀವಾಸದ ಮಾಯಾವತಿಗೆ ಒಪ್ಪಿಸುತ್ತಾರೆ. ಈ ಮಾಯಾವತಿ ರತೀದೇವಿಯ ಅಂಶ ಸಂಭೂತೆ. ಮೀನನ್ನು ಕೊಯ್ದಾಗ ಅದರ ಉದರದಲ್ಲಿದ್ದ ಸುಂದರಶಿಶುವನ್ನು ಕಂಡು ಆಕೆ ಆಶ್ಚರ್ಯ ಪಡುತ್ತಾಳೆ. ನಾರದರಿಂದ ಆ ಮಗು ಯಾರೆಂದು ತಿಳಿದು ಅದನ್ನು ವಿಶ್ವಾಸದಿಂದ ಬೆಳೆಸಿ ಯುದ್ಧ ವಿದ್ಯೆಯನ್ನೂ ಮಾಯಾವಿದ್ಯೆಯನ್ನೂ ಕಲಿಸುತ್ತಾಳೆ. ದೊಡ್ಡವನಾದ ಪ್ರದ್ಯುಮ್ನ ಯುದ್ಧದಲ್ಲಿ ಶಂಬರಾಸುರನನ್ನು ಕೊಂದು ರುಕ್ಮಿಣಿಯ ಅಣ್ಣ ರುಕ್ಮಿಯ ಮಗಳಾದ ರುಕ್ಮಾವತಿಯನ್ನು ಮದುವೆಯಾಗುತ್ತಾನೆ. ಇವರಿಬ್ಬರ ಮಗನೇ ಅನಿರುದ್ಧ. ಮುಂದೆ ಪ್ರದ್ಯುಮ್ನ ಯಾದವಕಲಹದಲ್ಲಿ ಅಸುನೀಗುತ್ತಾನೆ.
(ಡಿ.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ